ಪುತ್ತೂರು: ತಾಲೂಕು ಮಟ್ಟದಲ್ಲಿ ಪಶು ವೈದ್ಯಕೀಯ ಸೇವೆಗಳನ್ನು ಬಲಪಡಿಸಿ, ಜಾನುವಾರುಗಳು ಹಾಗೂ ಸಾಕುಪ್ರಾಣಿಗಳಿಗೆ ಉತ್ತಮ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಪುತ್ತೂರಿನಲ್ಲಿ ನಿರ್ಮಾಣಗೊಳ್ಳಲಿರುವ ತಾಲೂಕು ಮಟ್ಟದ ಪ್ರಥಮ ಪಶು ಪಾಲಿ ಕ್ಲಿನಿಕ್‌ನ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಪಶು ವೈದ್ಯಕೀಯ ಆಸ್ಪತ್ರೆಯ ಆವರಣದಲ್ಲಿ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ ಕಾರ್ಯಕ್ರಮವೂ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಅವರು, ಸರಕಾರ ಜನಪರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಪಶು ವೈದ್ಯಕೀಯ ಇಲಾಖೆಯ ಯೋಜನೆಗಳನ್ನು ತಳಮಟ್ಟಕ್ಕೆ ತಲುಪಿಸಲು ‘ಪಶು ಸಖಿ’ಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಜಾನುವಾರುಗಳ ಕಾಳಜಿಯನ್ನು ಗ್ರಾಮ ಮಟ್ಟದಲ್ಲೇ ನೋಡಿಕೊಳ್ಳುವ ವ್ಯವಸ್ಥೆಯನ್ನು ಸರಕಾರ ರೂಪಿಸಿದೆ ಎಂದರು.

ಹೈನುಗಾರರಿಗೆ ಉತ್ತೇಜನ ನೀಡಲು ಕೆಎಂಎಫ್ ಮೂಲಕ ಉತ್ತಮ ತಳಿಯ ಹಸುಗಳನ್ನು ಖರೀದಿ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ಕೊಯಿಲದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪಶು ವೈದ್ಯಕೀಯ ಕಾಲೇಜು ಆರಂಭವಾಗಲಿದ್ದು, ಇದರ ಅಭಿವೃದ್ಧಿಗೆ ವಿವಿಧ ಹಂತಗಳಲ್ಲಿ ಅನುದಾನ ಒದಗಿಸಲಾಗಿದೆ ಎಂದು ಹೇಳಿದರು. ಭವಿಷ್ಯದಲ್ಲಿ ಕೊಯಿಲ ಪಶು ವೈದ್ಯಕೀಯ ಕಾಲೇಜನ್ನು ವಿಶ್ವವಿದ್ಯಾನಿಲಯವಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆಯೂ ಇದ್ದು, ಇದರಿಂದ ಪುತ್ತೂರು ಹಾಗೂ ಉಪ್ಪಿನಂಗಡಿ ಭಾಗಗಳ ಅಭಿವೃದ್ಧಿಗೆ ಉತ್ತೇಜನ ದೊರೆಯಲಿದೆ ಎಂದು ಅಭಿಪ್ರಾಯಪಟ್ಟರು.
ಪಶುವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಧರ್ಮಪಾಲ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ 20 ತಾಲೂಕುಗಳ ಪಾಲಿಕ್ಲಿನಿಕ್ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತೂರು ತಾಲೂಕಿಗೆ ಪ್ರಥಮವಾಗಿ ಮಂಜೂರು ದೊರೆತಿದೆ ಎಂದು ತಿಳಿಸಿದರು. ಸುಮಾರು 40 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಕರ್ನಾಟಕ ಸ್ಟೇಟ್ ಹ್ಯಾಬಿಟೇಟ್ ಸೆಂಟರ್ ಮೂಲಕ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದರು.

ಕಾರ್ಯಕ್ರಮದ ಅಂಗವಾಗಿ ಇಲಾಖೆಯಿಂದ 18 ಫಲಾನುಭವಿಗಳಿಗೆ ತಲಾ 2 ರಬ್ಬರ್ ನೆಲಹಾಸು, 6 ಫಲಾನುಭವಿಗಳಿಗೆ ಮೇವು ಕತ್ತರಿಸುವ ಯಂತ್ರಗಳು ಹಾಗೂ ಅಮೃತ ಸಿರಿ ಯೋಜನೆಯಡಿ 3 ಫಲಾನುಭವಿಗಳಿಗೆ ಮಲೆನಾಡು ಗಿಡ್ಡ ತಳಿಯ ಹೆಣ್ಣು ಕರುಗಳನ್ನು ವಿತರಿಸಲಾಯಿತು. ಜೊತೆಗೆ 9ನೇ ಸುತ್ತಿನ ಕಾಲುಬಾಯಿ ಲಸಿಕಾ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಸಕರನ್ನು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಉಷಾ (ಉಪ್ಪಿನಂಗಡಿ), ಡಾ. ಎಂ.ಪಿ. ಪ್ರಕಾಶ್ (ಪಾಣಾಜೆ), ಗುತ್ತಿಗೆದಾರ ರಾಧಾಕೃಷ್ಣ ಸೇರಿದಂತೆ ವಿವಿಧ ಅಧಿಕಾರಿಗಳು, ಸಿಬಂದಿಗಳು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *