ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರ ಕಿರುವಾಳು ಬರುವ ದಾರಿಯಲ್ಲಿರುವ ಶಿಥಿಲಾವಸ್ಥೆಯ ಹಳೆ ಕಟ್ಟಡ ತೆರವು ವಿಚಾರದಲ್ಲಿ ಶಾಸಕರ ಹಾಗೂ ದೇವಳ ಆಡಳಿತ ಮಂಡಳಿ ವಿರುದ್ಧ ದಾಖಲಾಗಿರುವ ಕೇಸನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ, ಎ.27ರಂದು ಸಂಜೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭಕ್ತರು ಪುತ್ತೂರು ನಗರ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಡಿವೈಎಸ್ಪಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿದ ಬಳಿಕ ಶಾಸಕ ಅಶೋಕ್ ಕುಮಾರ್ ರೈ ಠಾಣೆಗೆ ಆಗಮಿಸಿ ಡಿವೈಎಸ್ಪಿಯವರೊಂದಿಗೆ ಚರ್ಚಿಸಿದರು.


ಈ ಸಂದರ್ಭದಲ್ಲಿ ದೇವಳ ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಹೇಮನಾಥ ಶೆಟ್ಟಿ ಕಾವು ಮಾತನಾಡಿ, ಹಳೆ ಕಟ್ಟಡ ತೆರವು ಭಕ್ತರ ಸ್ವಯಂ ನಿರ್ಧಾರವಾಗಿದ್ದು, ಶಾಸಕರು ಹಾಗೂ ದೇವಳದ ಅಧ್ಯಕ್ಷರು ಈ ಕಾರ್ಯದಲ್ಲಿ ನೇರವಾಗಿ ಭಾಗವಹಿಸಿದ್ದಾರೆ ಎಂಬ ಆರೋಪ ಸತ್ಯವಲ್ಲ ಎಂದು ಸ್ಪಷ್ಟಪಡಿಸಿದರು. ದೇವಳದ ಅಭಿವೃದ್ಧಿಗೆ ಶಾಸಕರು ಅಪಾರ ಕೊಡುಗೆ ನೀಡಿದ್ದಾರೆ. ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದರಿಂದ ಅನಾಹುತ ತಪ್ಪಿಸಲು ಭಕ್ತರು ತೆಗೆದುಕೊಂಡ ಕ್ರಮವನ್ನು ಶಾಸಕರ ಮೇಲೆ ಹೊರೆಸುವುದು ಸರಿಯಲ್ಲ ಎಂದರು. ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವುದಾದರೆ ಭಕ್ತರ ಮೇಲೆಯೂ ಕ್ರಮ ಕೈಗೊಳ್ಳಲಿ ಎಂದು ಅವರು ಆಗ್ರಹಿಸಿದರು.
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಅಪಾಯಕಾರಿಯಾದ ಹಳೆಯ ಕಟ್ಟಡವನ್ನು ಭಕ್ತರು ತೆರವುಗೊಳಿಸಿದ್ದು, ಇದರಲ್ಲಿ ತಮ್ಮ ಹಾಗೂ ದೇವಳದ ಅಧ್ಯಕ್ಷರ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಹೇಳಿದರು. ದೇವಳದ ಅಧ್ಯಕ್ಷರಿಗೆ ಬಂದ ಬೆದರಿಕೆ ಕರೆ ಕುರಿತು ದೂರು ದಾಖಲಾಗಿದ್ದು, ಇನ್ನೊಂದೆಡೆ ಜಾತಿ ನಿಂದನೆ ಕುರಿತು ನೀಡಿದ ದೂರು ದಾಖಲಿಸದಿರುವುದು ಪ್ರಶ್ನಾರ್ಥಕವಾಗಿದೆ ಎಂದರು. ಈ ಹಿನ್ನೆಲೆಯಲ್ಲಿ ತಮ್ಮ ಹಾಗೂ ದೇವಳದ ಅಧ್ಯಕ್ಷರ ವಿರುದ್ಧದ ಕೇಸನ್ನು ಹಿಂಪಡೆಯಬೇಕು ಎಂದು ಮನವಿ ಸಲ್ಲಿಸಲಾಗಿದೆ. ಜೊತೆಗೆ ಶಿಥಿಲ ಕಟ್ಟಡಗಳ ಬಗ್ಗೆ ನಗರಸಭೆಗೆ ವರದಿ ನೀಡಿ, ಅವುಗಳನ್ನು ದುರಸ್ಥಿ ಅಥವಾ ಭದ್ರತಾ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.






ಭಕ್ತರ ಪರವಾಗಿ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ಅನಾಮಿಕ ವ್ಯಕ್ತಿಗಳು ಶಾಸಕರ ಮತ್ತು ದೇವಳದ ಆಡಳಿತ ಮೊಕ್ತೇಸರಾದ ಈಶ್ವರ ಭಟ್ ವಿರುದ್ಧ ಸುಳ್ಳು ದೂರು ನೀಡಿರುವುದಾಗಿ ಆರೋಪಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಿ ಮಾನಹಾನಿ ಮಾಡಲಾಗಿದೆ ಎಂದು ಹೇಳಿ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ನಡುವೆ, ಭಕ್ತರ ಜಮಾವಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಪುತ್ತೂರು ನಗರ ಠಾಣೆಯ ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜ ಹಾಗೂ ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿತ್ತು. ಸುಳ್ಯ, ಸುಬ್ರಹ್ಮಣ್ಯ, ಕಡಬ ಪ್ರದೇಶಗಳಿಂದ ಹೆಚ್ಚುವರಿ ಪಡೆ ಹಾಗೂ ಕೆಎಸ್ಆರ್ಪಿ ಸಿಬ್ಬಂದಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕರೆಸಲಾಗಿತ್ತು. ಠಾಣೆ ಎದುರು ಬ್ಯಾರಿಕೇಡ್ ಅಳವಡಿಸಿ ಭಕ್ತರು ಒಳನುಗ್ಗದಂತೆ ತಡೆಗಟ್ಟಲಾಯಿತು.
ಸಂಜೆ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಟ ಭಕ್ತರು ಠಾಣೆ ಮುಂದೆ ಜಮಾಯಿಸಿ, ಇದು ಪ್ರತಿಭಟನೆ ಅಲ್ಲ, ಮನವಿ ಸಲ್ಲಿಸುವ ಉದ್ದೇಶ ಮಾತ್ರ ಎಂದು ಸ್ಪಷ್ಟಪಡಿಸಿದರು.
ಮನವಿ ಸಂದರ್ಭ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಸ್ಥಳೀಯ ಮುಖಂಡರು ಹಾಗೂ ಅನೇಕ ಭಕ್ತರು ಉಪಸ್ಥಿತರಿದ್ದರು.




