ಪುನರ್ಜೀವ ನೀಡಿದ ಸರ್ಕಾರಿ ಆಸ್ಪತ್ರೆ; ಮಾನವೀಯತೆ ಮೆರೆದ ಅಕ್ಕ ಪೊಲೀಸ್ ಪಡೆ
ಪುತ್ತೂರು, ಏ.27: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮಾರ್ಚ್ ತಿಂಗಳು ಒಳರೋಗಿಯಾಗಿ ದಾಖಲಾಗಿದ್ದ ಕೋಡಿಂಬಾಡಿ ಗ್ರಾಮದ ದಾರಂದ ಕುಕ್ಕುಮನೆ ನಿವಾಸಿಯಾದ 80 ವರ್ಷದ ಶ್ರೀಮತಿ ಲಕ್ಷ್ಮೀ ಅವರಿಗೆ ಮಾನವೀಯತೆಯ ಸ್ಪರ್ಶದೊಂದಿಗೆ ಪುನರ್ವಸತಿ ಕಲ್ಪಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ.




ಅನಾರೋಗ್ಯದಿಂದ ಸಾಯುವ ಸ್ಥಿತಿಯಲ್ಲಿದ್ದ ವೃದ್ಧೆಗೆ ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಯದುರಾಜ್ ಡಿ.ಕೆ ಅವರ ಮಾರ್ಗದರ್ಶನದಲ್ಲಿ ವೈದ್ಯಕೀಯ ತಂಡವು ಅತ್ಯುತ್ತಮ ಚಿಕಿತ್ಸೆ ಮತ್ತು ಆರೈಕೆ ನೀಡಿದ್ದು, ಅವರು ಮತ್ತೆ ನಡೆಯುವ ಮಟ್ಟಕ್ಕೆ ಚೇತರಿಸಿಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಯ ಸೇವಾಭಾವಕ್ಕೆ ಇದು ಜೀವಂತ ಸಾಕ್ಷಿಯಾಗಿದೆ.




ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳ ವಿನಂತಿಯ ಮೇರೆಗೆ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀ ಹರೀಶ್.ಕೆ ಹಾಗೂ ಸಹಾಯಕ ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ವಿಕಲಚೇತನರ ನೋಡೆಲ್ ಅಧಿಕಾರಿಯಾದ ಶ್ರೀಮತಿ ಮಂಗಳ ಕಾಳೆಯವರ ಮಾರ್ಗದರ್ಶನದಲ್ಲಿ, ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ವೃದ್ಧೆಯನ್ನು ಪುತ್ತೂರು ಕಸಬಾ ಗ್ರಾಮದ ಕರೆಮೊಲೆ ದೀಪಶ್ರೀ ಹಿರಿಯ ನಾಗರಿಕರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಯಿತು.
ಈ ಸಂದರ್ಭದಲ್ಲಿ ಪುತ್ತೂರು ಪೊಲೀಸ್ ಇಲಾಖೆಯ ಅಕ್ಕಪಡೆಯ ಸಿಬ್ಬಂದಿಗಳಾದ ಸಂಧ್ಯಾ, ನವ್ಯ ಮತ್ತು ರೇವತಿ, ಚಾಲಕರಾದ ನವಾಜ್ ಬಡ್ಕಿ ಅವರು ವೃದ್ಧೆಯ ಕೈ ಹಿಡಿದು ಆಶ್ರಮದತ್ತ ಕರೆದೊಯ್ದ ಘಟನೆ ಮಾನವೀಯತೆ ಮೆರೆದ ಉದಾಹರಣೆಯಾಗಿದೆ. ವಾಹನ ಚಾಲಕರಾದ ನವಾಜ್ ಬಡ್ಕಿ ಅವರು ತಮ್ಮ ದುಡಿಮೆಯ ಒಂದು ಭಾಗವನ್ನು ವೃದ್ಧೆಯ ಖರ್ಚಿಗೆ ನೀಡಿದ ಮಾನವೀಯ ನಡೆ ಸಹ ಗಮನಾರ್ಹವಾಗಿದೆ.
ಆಸ್ಪತ್ರೆಯಿಂದ ಆಶ್ರಮಕ್ಕೆ ತೆರಳುವ ವೇಳೆ, ವೃದ್ಧೆ ಡಾ. ಯದುರಾಜ್ ಅವರನ್ನು ಕರೆದು ಎರಡು ಕೈಗಳನ್ನು ಜೋಡಿಸಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಹೆಸರು ಸಿಬ್ಬಂದಿಗಳು ದೇವರ ರೂಪದಲ್ಲಿ ತನ್ನ ರಕ್ಷಣೆ ಮಾಡಿದ್ದಾರೆ ಎಂದು ಕೃತಜ್ಞತೆಯೊಂದಿಗೆ ಧನ್ಯವಾದ ಸಲ್ಲಿಸಿದ ಕ್ಷಣ ಹಾಜರಿದ್ದವರಲ್ಲಿ ಭಾವುಕತೆ ಮೂಡಿಸಿತು.
ಬೆಂಗಳೂರಿನ ದೀಪಶ್ರೀ ಆಸ್ಪತ್ರೆಯ ಡಾ. ಶ್ರೀಧರ್ ಅವರು ವೃದ್ಧೆಯನ್ನು ಯಾವುದೇ ಶುಲ್ಕವಿಲ್ಲದೆ ಆಶ್ರಮದಲ್ಲಿ ಸೇರಿಸಿಕೊಳ್ಳಲು ಮುಂದಾಗಿರುವುದು ಅವರ ಹೃದಯ ವೈಶಾಲ್ಯತೆಯನ್ನು ತೋರಿಸುತ್ತದೆ. ಈಗಾಗಲೇ ಪುತ್ತೂರು ಮೈಸೂರು ಹಾಗೂ ಬೆಂಗಳೂರಿನಲ್ಲಿ ದೀಪಶ್ರೀ ವೃದ್ಧರ ಪುನರವಸತಿ ಕೇಂದ್ರ ಅತ್ಯಂತ ಸೇವಾ ಭಾವದಲ್ಲಿ ನಡೆಯುತ್ತಿರುವುದು ಡಾ. ಶ್ರೀಧರ್ ಅವರ ಸೇವಾ ಭಾವಕ್ಕೆ ಪ್ರತ್ಯಕ್ಷ ದರ್ಪಣವಾಗಿದೆ.
ಈ ಕಾರ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಶ್ರೀಮತಿ ಯಶೋದಾ, ತಾಲೂಕು ಪಂಚಾಯತ್ ವಿಕಲಚೇತನರ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ನವೀನ್ ಕುಮಾರ್, ಆಟೋ ಚಾಲಕರಾದ ನಾರಾಯಣ ಅಕ್ಕಪಡೆಯ ಪೊಲೀಸ್ ಸಿಬ್ಬಂದಿಗಳು ಹಾಗೂ ಇತರರು ಸಹಕರಿಸಿದರು.
ಒಟ್ಟಾರೆ, ವಿವಿಧ ಇಲಾಖೆಗಳ ಸಮನ್ವಯ ಹಾಗೂ ಸುವರ್ಣ ಕನ್ನಡಿಗ ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯ ಮಾನವೀಯ ಮೌಲ್ಯಗಳಿಗೆ ಮೆರಗು ತಂದ ಒಂದು ಆದರ್ಶ ಪುನರ್ವಸತಿ ಕಾರ್ಯವಾಗಿ ಪರಿಣಮಿಸಿದೆ.


