ಕಡಬ: ಕಡಬ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ನೇತೃತ್ವದ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ಬಳಿಕ ಸರಕಾರ ಮೊದಲು ಮೂವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿತ್ತು. ಆದರೆ ಆ ಆಯ್ಕೆ ಕುರಿತು ಪಕ್ಷದೊಳಗೆ ತೀವ್ರ ಆಕ್ಷೇಪ ವ್ಯಕ್ತವಾಗಿ, ಆ ಪಟ್ಟಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಐದು ತಿಂಗಳ ಬಳಿಕ ಇದೀಗ ಎರಡನೇ ಪಟ್ಟಿ ಪ್ರಕಟಿಸಲಾಗಿದೆ.
ಹೊಸ ಪಟ್ಟಿಯಲ್ಲಿ ಮೊದಲ ಪಟ್ಟಿಯಲ್ಲಿದ್ದ ಇಬ್ಬರ ಹೆಸರು ಕೈಬಿಟ್ಟು, ಹೊಸದಾಗಿ ಇಬ್ಬರನ್ನು ಸೇರಿಸಲಾಗಿದೆ. ಕಡಬ ಬ್ಲಾಕ್ ಕಾಂಗ್ರೆಸ್ ಮುಖಂಡರಾದ ಶಾಲಿನಿ ಸತೀಶ್ ನ್ಯಾಕ್ ಮೇಲಿನ ಮನೆ, ಕಾಂಗ್ರೆಸ್ ಕಾರ್ಯಕರ್ತ ಮೋಹನ್ ದಾಸ್ ಕೋಡಿಂಬಾಲ ಹಾಗೂ ಕಡಬ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಫಝಲ್ ಕೋಡಿಂಬಾಲ ಅವರನ್ನು ನಾಮನಿರ್ದೇಶಿತ ಸದಸ್ಯರಾಗಿ ನೇಮಕ ಮಾಡಲಾಗಿದೆ.







ಈ ಹಿಂದೆ 2025ರ ಸೆಪ್ಟೆಂಬರ್ 29ರಂದು ಶಾಲಿನಿ ಸತೀಶ್ ನ್ಯಾಕ್, ಕಡಬ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶ್ರಫ್ ಶೇಡಿ ಗುಂಡಿ ಮತ್ತು ಆಶಿಸ್ ಅರಸ್ ಕೆ ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿತ್ತು. ಅವರು ಅಧಿಕಾರ ಸ್ವೀಕರಿಸಿ ಪಟ್ಟಣ ಪಂಚಾಯಿತಿಯ ಒಂದು ಸಭೆಯಲ್ಲಿ ಭಾಗವಹಿಸಿದ್ದರು.
ಆದರೆ ಈ ನೇಮಕಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದೊಳಗೆ ಅಸಮಾಧಾನ ಉಂಟಾಗಿತ್ತು. ಹಿರಿಯ ಮುಖಂಡರೊಬ್ಬರ ಪುತ್ರನನ್ನು ಕಡಬದಲ್ಲಿ ಮತದಾನದ ಹಕ್ಕು ಇಲ್ಲದಿದ್ದರೂ ನೇಮಕ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯನ್ನೂ ಆಯ್ಕೆ ಮಾಡಿರುವುದರ ವಿರುದ್ಧ ಆಕ್ಷೇಪ ವ್ಯಕ್ತವಾಗಿತ್ತು. ಮುಖ್ಯವಾಗಿ, ಈ ಪಟ್ಟಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಗಮನಕ್ಕೆ ತಾರದೆ ಏಕಪಕ್ಷೀಯವಾಗಿ ತಯಾರಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ನೀಡುವ ಪಟ್ಟಿ ಅಂತಿಮಗೊಳಿಸಬೇಕು ಎಂದು ಪಕ್ಷದ ವರಿಷ್ಠರಿಗೆ ಮನವಿ ಸಲ್ಲಿಸಲಾಗಿತ್ತು. ಇದೀಗ ಬ್ಲಾಕ್ ಕಾಂಗ್ರೆಸ್ ನೀಡಿದ ಪಟ್ಟಿ ಅಂತಿಮಗೊಂಡಿದ್ದು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮೇಲುಗೈ ಸಾಧಿಸಿರುವುದು ಗಮನಾರ್ಹವಾಗಿದೆ.



