ಸುಬ್ರಹ್ಮಣ್ಯ : ಸಮೀಪದ ಐನೆಕಿದು ಗ್ರಾಮದ ಖಾಸಗಿ ಜಮೀನಿನ ಪಕ್ಕದ ಕಾಡು ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಅಸ್ತಿ ಪಂಜರ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.
ಪತ್ತೆಯಾದ ಅಸ್ತಿ ಪಂಜರವು ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಕಲ್ಮಕಾರು ಗ್ರಾಮದ ನಿವಾಸಿ ಯಶವಂತ ಕಾಜಿಮಡ್ಕ ಅವರದ್ದಾಗಿರಬಹುದೆಂದು ಶಂಕಿಸಲಾಗಿದೆ. ಯಶವಂತ ಅವರು ನಿಗೂಢವಾಗಿ ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಹಾಗೂ ಕುಟುಂಬಸ್ಥರು ಸಾಕಷ್ಟು ಹುಡುಕಾಟ ನಡೆಸಿದರೂ ಅವರು ಪತ್ತೆಯಾಗಿರಲಿಲ್ಲ.





ಯಶವಂತ ಅವರು ತಮ್ಮ ಪತ್ನಿಯೊಂದಿಗೆ ಐನೆಕಿದು ಗ್ರಾಮದ ಪ್ರಶಾಂತ್ ಕೊನಡ್ಕ ಎಂಬವರ ಮನೆಯಲ್ಲಿ ಕೆಲಕಾಲದಿಂದ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇದೀಗ ಅಸ್ತಿ ಪಂಜರ ಪತ್ತೆಯಾದ ಸ್ಥಳವು ಅದೇ ಜಮೀನಿನ ಪಕ್ಕದ ಕಾಡು ಪ್ರದೇಶವಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಅಸ್ತಿ ಪಂಜರ ಸಂಪೂರ್ಣವಾಗಿ ಕುಲುಚಿಕೊಂಡಿದ್ದು, ಸ್ಥಳದಲ್ಲಿ ಯಶವಂತ ಅವರದ್ದೆಂದು ಶಂಕಿಸಲಾದ ಮೊಬೈಲ್ ಫೋನ್ ಕೂಡ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಸ್ತಿ ಪಂಜರವನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕವೇ ಮೃತದೇಹದ ಗುರುತು ಹಾಗೂ ಸಾವಿನ ನಿಖರ ಕಾರಣ ಸ್ಪಷ್ಟವಾಗಲಿದೆ.




