ಪುತ್ತೂರು: ಕಾಲೇಜು ವಿದ್ಯಾರ್ಥಿಯ ಮೇಲೆ ಗುಂಪು ಹಲ್ಲೆ ನಡೆದ ಘಟನೆ ಪುತ್ತೂರಿನ ಕಸಬಾ ಗ್ರಾಮದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದಲ್ಲಿ ಏಪ್ರಿಲ್ 22ರಂದು ಸಂಜೆ ನಡೆದಿದೆ.
ಬೆಳ್ತಂಗಡಿ ನಿವಾಸಿ ಆದಿಲ್ ಹುಸೈನ್ (21) ಎಂಬವರು ಪುತ್ತೂರಿನ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಘಟನೆ ನಡೆದ ದಿನ ಸ್ನೇಹಿತರಾದ ಸುಹೇಲ್ ಮತ್ತು ಅಝಾರ್ ಅವರೊಂದಿಗೆ ಚಹಾ ಕುಡಿಯುತ್ತಿದ್ದರು. ಈ ವೇಳೆ ಪರಿಚಯದವರಾದ ಬಿ.ಕೆ. ಮೊಯಿನುದ್ದೀನ್, ಮೊಹದ್ ಹಾಗೂ ಇತರ ಐದು ಮಂದಿ ಅಲ್ಲಿಗೆ ಬಂದು ಆದಿಲ್ ಮೇಲೆ ಹಲ್ಲೆ ನಡೆಸಿದರೆಂದು ದೂರಲಾಗಿದೆ.

ಪಿರ್ಯಾದಿದಾರರ ಸ್ನೇಹಿತರು ಹಲ್ಲೆಯ ಬಗ್ಗೆ ಪ್ರಶ್ನಿಸಿದಾಗ ಅವರಿಗೆ ಸಹ ಆರೋಪಿಗಳು ಬೆದರಿಕೆ ಒಡ್ಡಿದ್ದಾರೆ. ಸ್ಥಳದಲ್ಲಿದ್ದ ಸಾರ್ವಜನಿಕರು ಗಲಾಟೆ ತಡೆಯಲು ಮುಂದಾದಾಗ ಆರೋಪಿಗಳು ಅವ್ಯಾಚವಾಗಿ ಬೈದು ಜೀವ ಬೆದರಿಕೆ ಹಾಕಿ ಅಲ್ಲಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಹಲ್ಲೆಯಿಂದ ಗಾಯಗೊಂಡ ಆದಿಲ್ ಅವರನ್ನು ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೆಲವು ತಿಂಗಳ ಹಿಂದೆ ಕಾಲೇಜು ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆಯನ್ನು ಆದಿಲ್ ಅವರು ಮಧ್ಯಸ್ಥಿಕೆ ವಹಿಸಿ ನಿಲ್ಲಿಸಿದ್ದ ಹಿನ್ನೆಲೆ ಇದಕ್ಕೆ ಪ್ರತೀಕಾರವಾಗಿ ಈ ಹಲ್ಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 49/2026ರಂತೆ ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 189(2), 191(2), 191(3), 352, 115(2), 118(1), 351(2) ಹಾಗೂ 190ರಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

Leave a Reply

Your email address will not be published. Required fields are marked *