ಬೆಂಗಳೂರು: ಸಿಲಿಕಾನ್ ಸಿಟಿಯ ಟ್ರಾಫಿಕ್ ನಡುವೆ ನೈಸ್ ರಸ್ತೆಯಲ್ಲಿ ಸಂಚರಿಸುವವರಿಗೆ ಟೋಲ್ ಬರೆ ಹೊಸದೇನಲ್ಲ. ಆದರೆ, ಈಗ ಸೈಕಲ್ ಸವಾರನಿಗೂ ಟೋಲ್ ಕೇಳಿರುವ ಘಟನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸೈಕಲ್ ಸವಾರನೊಬ್ಬನಿಗೆ ಟೋಲ್ ಸಿಬ್ಬಂದಿ ಹಣಕ್ಕಾಗಿ ಪೀಡಿಸುತ್ತಿರುವ ವಿಡಿಯೋ ಈಗ ಎಲ್ಲೆಡೆ ಹರಿದಾಡ್ತಾ ಇದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.




ಸೈಕಲ್‍ಗೂ ಬೇಕಾ ಟೋಲ್ ಶುಲ್ಕ?
ಭಾರತದ ಧ್ವಜವನ್ನು ಹಿಡಿದು ಸೈಕಲ್ ಮೂಲಕ ದೇಶಾದ್ಯಂತ ಸಂಚರಿಸುತ್ತಿರುವ ಸವಾರನೊಬ್ಬ ನೈಸ್ ರಸ್ತೆಯ ಟೋಲ್ ಪ್ಲಾಜಾಕ್ಕೆ ಬಂದಾಗ ಈ ಘಟನೆ ನಡೆದಿದೆ. ಸೈಕಲ್ ಸವಾರನನ್ನು ತಡೆದ ಟೋಲ್ ಸಿಬ್ಬಂದಿ, ಒಂದು ಕಡೆಯ ಪ್ರಯಾಣಕ್ಕೆ 25 ರೂಪಾಯಿ ಹಣ ಕಟ್ಟು ಎಂದು ಒತ್ತಾಯಿಸಿದ್ದಾರೆ. ಸೈಕಲ್ ಸವಾರ ಆಶ್ಚರ್ಯಚಕಿತನಾಗಿ ಪ್ರಶ್ನಿಸಿದರೂ, ಸಿಬ್ಬಂದಿ ಮಾತ್ರ ರೇಗಾಡುತ್ತಾ ಅವಾಜ್ ಹಾಕಿದ್ದಾರೆ.



ಏನು ಹೇಳುತ್ತೆ ನಿಯಮ?
ಸೈಕಲ್ ಸವಾರರೇ ಗಮನಿಸಿ, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ರಾಜ್ಯ ರಸ್ತೆ ಅಭಿವೃದ್ಧಿ ನಿಯಮಗಳ ಪ್ರಕಾರ, ಯಾವುದೇ ಕಾರಣಕ್ಕೂ ಸೈಕಲ್‍ಗಳಿಗೆ ಟೋಲ್ ಶುಲ್ಕ ಪಾವತಿಸುವ ಅಗತ್ಯವಿಲ್ಲ. ದ್ವಿಚಕ್ರ ವಾಹನಗಳಿಗೆ ಕೆಲವು ಎಕ್ಸ್‍ಪ್ರೆಸ್‍ವೇಗಳಲ್ಲಿ ವಿನಾಯಿತಿ ಇರದಿದ್ದರೂ, ಸೈಕಲ್‍ಗಳಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಹೀಗಿದ್ದರೂ ನೈಸ್ ರಸ್ತೆಯ ಸಿಬ್ಬಂದಿ ಸೈಕಲ್ ಸವಾರನಿಗೆ ಟೋಲ್ ಕೇಳಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಎದ್ದಿದೆ.


