ಪುತ್ತೂರು: ದುಂದುವೆಚ್ಚ ಮತ್ತು ಅಧಾರ್ಮಿಕ ಆಚರಣೆಗಳಿಂದ ಮದುವೆ ತನ್ನ ಪಾವಿತ್ರ್ಯತೆಯನ್ನು ಕಳೆದುಕೊಳ್ಳುತ್ತಿರುವ ಹಿನ್ನೆಲೆ, ಯುವಜನಾಂಗ ಮತ್ತು ಪೋಷಕರಲ್ಲಿ ಸರಳ ಮದುವೆ ಸಂಪ್ರದಾಯವನ್ನು ಉತ್ತೇಜಿಸಲು ಕರ್ನಾಟಕ ರಾಜ್ಯ ಸುನ್ನಿ ಯುವಜನ ಫೆಡರೇಶನ್ (ಎಸ್‍ವೈಎಸ್) ವತಿಯಿಂದ ಹಮ್ಮಿಕೊಂಡಿರುವ ‘ಮಾದರಿ ಮದುವೆ’ ಅಭಿಯಾನದ ಸಮಾರೋಪ ಸಮಾರಂಭವು ಮೇ 2ರಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಎಸ್‍ವೈಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮದುವೆ ಪವಿತ್ರವಾದ ಕಾರ್ಯವಾಗಿದ್ದು, ಇತ್ತೀಚಿನ ದಿನಗಳಲ್ಲಿ ಅದ್ದೂರಿ ಆಚರಣೆಗಳ ಹೆಸರಿನಲ್ಲಿ ಅನಾಚಾರ ಚಟುವಟಿಕೆಗಳು ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಇದರಿಂದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಸಾಲದ ಭಾರದಿಂದ ಮದುವೆಯನ್ನೇ ಹಿಂಜರಿಯುವ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ‘ಮಾದರಿ ಮದುವೆ’ ಅಭಿಯಾನವನ್ನು ರಾಜ್ಯದಾದ್ಯಂತ ನಡೆಸಲಾಗುತ್ತಿದ್ದು, ಸುಮಾರು 800 ಮೊಹಲ್ಲಾಗಳಲ್ಲಿ ಸಾವಿರಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಾಜದಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಅವರು ತಿಳಿಸಿದರು.
ಮೇ 2ರಂದು ಸಂಜೆ 5.30ಕ್ಕೆ ಕಿಲ್ಲೆ ಮೈದಾನದ ಖುರ್ರತುಸ್ಸಾದಾತ್ ವೇದಿಕೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಅದಕ್ಕೂ ಮೊದಲು ಸಂಜೆ 4 ಗಂಟೆಗೆ ದರ್ಬೆ ವೃತ್ತದಿಂದ ಕಿಲ್ಲೆ ಮೈದಾನದವರೆಗೆ ಜನಜಾಗೃತಿ ಕಾಲ್ನಡಿಗೆ ಜಾಥಾ ನಡೆಯಲಿದ್ದು, ಧರ್ಮಗುರುಗಳು, ಜಮಾತ್ ನಾಯಕರು ಹಾಗೂ ಯುವ-ಯುವತಿಯರು ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಸಮಾರೋಪ ಭಾಷಣ ಮಾಡಲಿದ್ದು, ಸುನ್ನೀ ಜಂಇಯತುಲ್ ಉಲಮಾ ರಾಜ್ಯಾಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಸಮಸ್ತ ಉಲಮಾ ಒಕ್ಕೂಟದ ಕಾರ್ಯದರ್ಶಿ ಪೇರೋಡ್ ಅಬ್ದರ್ರಹ್ಮಾನ್ ಸಖಾಫಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹಾಗೂ ಪುತ್ತೂರು ಶಾಸಕ ಅಶೋಕ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸುನ್ನಿ ಜಂಇಯತುಲ್ ಉಲಮಾ, ಮುಸ್ಲಿಂ ಜಮಾತ್, ಎಸ್‍ಎಸ್‍ಎಫ್, ಎಸ್‍ಜೆಎಂ, ಎಸ್‍ಎಂಎ, ಕೆಸಿಎಫ್ ಸೇರಿದಂತೆ ವಿವಿಧ ಸಂಘಟನೆಗಳ ನಾಯಕರು, ಧಾರ್ಮಿಕ ಹಾಗೂ ಸಾಮಾಜಿಕ ಗಣ್ಯರು ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ‘ಅಕ್ಷರ ಸಂತ’ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಯೂಸುಫ್ ಗೌಸಿಯಾ, ಜಿಲ್ಲಾಧ್ಯಕ್ಷ ಅಶ್ರಫ್ ಸಖಾಫಿ ಮೂಡಡ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಲಿಹ್ ಮುರ, ಸ್ವಾಗತ ಸಮಿತಿ ಕಾರ್ಯದರ್ಶಿ ಇಕ್ಬಾಲ್ ಬಪ್ಪಳಿಗೆ ಹಾಗೂ ಉಪಾಧ್ಯಕ್ಷ ಉಮ್ಮರ್ ಹಾಜಿ ಕರುವೇಲ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *