ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಮಾಚಾರು ಮಣಿಕ್ಕೆಯಲ್ಲಿ ಕುಡಿದ ಮತ್ತಿನಲ್ಲಿ ತಂದೆಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ತಂದೆ ಮತ್ತು ಮಗನ ನಡುವೆ ನಡೆದ ಗಲಾಟೆಯು ವಿಕೋಪಕ್ಕೆ ತಿರುಗಿ, ಮಗನೇ ತಂದೆಯನ್ನು ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಮಾಚಾರು ಮಣಿಕ್ಕೆ ಎಂಬಲ್ಲಿ ಏಪ್ರಿಲ್ 19ರಂದು ರಾತ್ರಿ ನಡೆದಿದೆ.





ಉಜಿರೆಯ ಮಣಿಕ್ಕೆ ನಿವಾಸಿ, ಗಾರೆ ಕೆಲಸ ಮಾಡುತ್ತಿರುವ ನಾರಾಯಣ (52) ಗಾಯಗೊಂಡ ತಂದೆ. ಇವರ ಮಗ ಭರತ್ (25) ಎಂಬಾತ ಟಿಂಬರ್ ಕೆಲಸ ಮಾಡುತ್ತಿದ್ದನು. ಏಪ್ರಿಲ್ 19ರಂದು ರಾತ್ರಿ ಮನೆಯಲ್ಲಿದ್ದಾಗ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಕುಡಿದ ಮತ್ತಿನಲ್ಲಿದ್ದ ಭರತ್ ಮನೆಯ ಹೊರಭಾಗದಲ್ಲಿದ್ದ ತನ್ನ ತಂದೆಯ ಕುತ್ತಿಗೆ ಮತ್ತು ಕೈಗೆ ಕತ್ತಿಯಿಂದ ಮನಬಂದಂತೆ ಕಡಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ನಾರಾಯಣ ಅವರನ್ನು ತಕ್ಷಣವೇ ಅಕ್ಕಪಕ್ಕದವರು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ BNS ಸೆಕ್ಷನ್ 109, 352, 351(3) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿದ್ದ ಆರೋಪಿ ಭರತ್ನನ್ನು ಏಪ್ರಿಲ್ 20ರಂದು ಬೆಳಗ್ಗೆ ಉಜಿರೆಯಲ್ಲಿ ಬೆಳ್ತಂಗಡಿ ಪ್ರಭಾರ ಸಬ್ ಇನ್ಸ್ಪೆಕ್ಟರ್ ಸಿಖಂದರ್ ಪಾಷ ನೇತೃತ್ವದ ತಂಡ ಬಂಧಿಸಿದೆ.


ಬಂಧಿತ ಆರೋಪಿಯನ್ನು ಅಂದು ರಾತ್ರಿಯೇ ಬಂಟ್ವಾಳ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿನಿ ಸಿ.ಕೆ. ಅವರ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪ್ರಭಾರ ಸಬ್ ಇನ್ಸ್ಪೆಕ್ಟರ್ ಸಿಖಂದರ್ ಪಾಷ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

