ಉಪ್ಪಿನಂಗಡಿ: ನೀರು ಕೇಳುವ ನೆಪದಲ್ಲಿ ಹಾಡು ಹಗಲೇ ಮನೆಗೆ ನುಗ್ಗಿ ಮಹಿಳೆಯರನ್ನು ಭೀತಿಗೊಳಪಡಿಸಿದ್ದ ಅಪರಿಚಿತ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಉಪ್ಪಿನಂಗಡಿಯ ಬ್ಯಾಂಕ್ ರಸ್ತೆಯಲ್ಲಿ ನಡೆದಿದೆ.
ಮಾಹಿತಿಯಂತೆ, ಮನೆಯಲ್ಲಿದ್ದ ವೃದ್ಧೆ ಬಳಿ ನೀರು ಕೇಳುವ ನೆಪದಲ್ಲಿ ಬಂದ ವ್ಯಕ್ತಿ, ವೃದ್ಧೆ ಅಡುಗೆಮನೆಯಲ್ಲಿ ನೀರು ತರಲು ಹೋಗಿದ್ದ ಸಂದರ್ಭವನ್ನು ಬಳಸಿಕೊಂಡು ಮನೆಗೆ ನುಗ್ಗಿ ಬಾಗಿಲಿಗೆ ಚಿಲಕ ಹಾಕಿದ್ದಾನೆ. ಇದನ್ನು ಗಮನಿಸಿದ ವೃದ್ಧೆ ಭೀತಿಯಿಂದ ಕೂಗಿಕೊಂಡಾಗ, ಆರೋಪಿಯು ಅಲ್ಲಿಂದ ಪರಾರಿಯಾಗಿದ್ದಾನೆ.







ನಂತರ ಸನಿಹದಲ್ಲಿದ್ದ ಇನ್ನೊಂದು ಮನೆಯಲ್ಲಿ ಒಬ್ಬ ಮಹಿಳೆ ಮಾತ್ರ ಇರುವುದನ್ನು ಗಮನಿಸಿ, ಆ ಮನೆಯ ಕೊಠಡಿಗೆ ನುಗ್ಗಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಹಾಗೂ ಸ್ಥಳೀಯರು ಕೂಗಿಕೊಂಡಾಗ, ಆರೋಪಿಯು ಅಲ್ಲಿಂದ ಓಡಿ ಹೋಗಿ ಸಮೀಪದ ಉದ್ಯಮಿಯೊಬ್ಬರ ಮನೆಯ ಹಿಂಭಾಗದ ಕಟ್ಟಡದಲ್ಲಿ ಅವಿತುಕೊಂಡಿದ್ದಾನೆ.
ಸ್ಥಳೀಯರು ಹಿಂಬಾಲಿಸಿ ಆತನನ್ನು ಪತ್ತೆಹಚ್ಚಿ ಹಿಡಿದು, ಉದ್ಯಮಿಗೆ ಮಾಹಿತಿ ನೀಡಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಮಲಯಾಳಂ ಭಾಷೆಯಲ್ಲಿ ಮಾತನಾಡಿ, ತಾನು ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾನೆ.
ಘಟನೆಯ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


