ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ದಿಲ್ಲಿಯಿಂದ ವ್ಯಕ್ತಿಯೊಬ್ಬ ಕರೆ ಮಾಡಿ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಈ ವಿಷಯವನ್ನು ಶಾಸಕರು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವತಃ ಬಹಿರಂಗಪಡಿಸಿದರು.






ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ, ಬಲ್ನಾಡ್ ಕ್ಷೇತ್ರದ ಉಳ್ಳಾಲ್ತಿ ದೈವದ ಕಿರುವಾಳು ಭಂಡಾರ ಬರುವ ದಾರಿಯಲ್ಲಿದ್ದ ಹಳೆಯ ಕಟ್ಟಡವನ್ನು ಭಾಗಶಃ ಕೆಡವಿದ ವಿಚಾರಕ್ಕೆ ಸಂಬಂಧಿಸಿದಂತೆ ಈ ಬೆದರಿಕೆ ಕರೆ ಬಂದಿರುವುದಾಗಿ ಅವರು ತಿಳಿಸಿದರು.
ಮೊದಲಿಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿದ ವ್ಯಕ್ತಿ, ಬಳಿಕ ಕರೆ ಮಾಡಿ ಹಿಂದಿ ಭಾಷೆಯಲ್ಲಿ ಬೆದರಿಕೆ ಹಾಕಿದ್ದಾನೆ. “ನೀವು ಖಾಸಗಿ ಜಾಗಕ್ಕೆ ಪ್ರವೇಶ ಮಾಡಿದ್ದೀರಿ. ನಾನು ದಿಲ್ಲಿಯಿಂದ ಪಿಎಂಒ ಕಚೇರಿಯ ಸಹಾಯದಿಂದ ಮಾತನಾಡುತ್ತಿದ್ದೇನೆ” ಎಂದು ಹೇಳಿದ್ದಾನೆ. ಬಳಿಕ ಆತನೇ ತಾನು ಆದಾಯ ತೆರಿಗೆ ಇಲಾಖೆಯಿಂದ ಮಾತನಾಡುತ್ತಿದ್ದೇನೆ ಎಂದು ಹೇಳಿದ್ದಾನೆ.
ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಅಶೋಕ್ ರೈ, “ನಾನು ಯಾವುದೇ ತಪ್ಪು ಮಾಡಿಲ್ಲ. ಆದಾಯ ತೆರಿಗೆ ಇಲಾಖೆಯ ಹೆಸರಿನಲ್ಲಿ ಬೆದರಿಸಿದರೂ ನನಗೆ ಭಯವಿಲ್ಲ” ಎಂದು ಉತ್ತರ ನೀಡಿರುವುದಾಗಿ ಹೇಳಿದರು.
ಇಂತಹ ಬೆದರಿಕೆ ಕರೆ ಬಗ್ಗೆ ಪೊಲೀಸರಿಗೆ ದೂರು ನೀಡದಿರುವ ಬಗ್ಗೆ ಪ್ರಶ್ನಿಸಿದಾಗ, “ಇದನ್ನು ನಾನು ಗಂಭೀರವಾಗಿ ಪರಿಗಣಿಸಿಲ್ಲ. ನನ್ನ ವಿರುದ್ಧ ಕೆಲವರು ಹಿತಶತ್ರುಗಳಿದ್ದಾರೆ. ದೇವರ ಕಾರ್ಯಕ್ಕಾಗಿ ನೂರು ಪ್ರಕರಣಗಳನ್ನೂ ಎದುರಿಸಲು ಸಿದ್ಧನಿದ್ದೇನೆ” ಎಂದು ಅವರು ಸ್ಪಷ್ಟಪಡಿಸಿದರು.




